ರೈತನ ಸಂಕಷ್ಟಕ್ಕೆ ರೈಟರ್ ಫೈಟರ್ ಆದ ಕಥೆ - ರೇಟಿಂಗ್: 4/5 ****
Posted date: 07 Sat, Oct 2023 09:00:16 AM
ಬಂಡವಾಳ‌ಶಾಹಿಗಳು ನಮ್ಮ ರೈತರನ್ನು ಯಾವ ರೀತಿ ವಂಚಿಸಿ ಅವರನ್ನು ತುಳಿಯುತ್ತಿದ್ದಾರೆ ಎಂಬುದನ್ನು ನಿರ್ದೇಶಕ ನೂತನ್ ಉಮೇಶ್ ಫೈಟರ್ ಚಿತ್ರದ ಮೂಲಕ  ಹೇಳಲು ಪ್ರಯತ್ನಿಸಿದ್ದಾರೆ. ಒಬ್ಬ ರೈಟರ್, ಫೈಟರ್ ಮತ್ತು ಶೂಟರ್ ಹೇಗಾಗುತ್ತಾನೆ ಎನ್ನುವುದೇ ಚಿತ್ರದ ತಿರುಳು. 
 
ಇಲ್ಲಿ  ಲವ್, ಆಕ್ಷನ್, ಮದರ್ ಸೆಂಟಿಮೆಂಟ್ ಜೊತೆಗೆ ಜವಾಬ್ದಾರಿಯುತ ತಂದೆಯ ಕಥೆಯೂ ಇದೆ.  ಮುಖ್ಯವಾಗಿ ನಮಗೆಲ್ಲ ಅನ್ನ ಬೆಳೆದುಕೊಡುವ ರೈತರ ನೋವಿನ ಕಥೆಯಿದೆ. 
 
ನಾಯಕ ಮೋಹಕ್(ವಿನೋದ್ ಪ್ರಭಾಕರ್), ನಾಯಕಿ ವಿಸ್ಮಯ (ಲೇಖಾಚಂದ್ರ) ಇಬ್ಬರ ಪರಿಚಯವಾಗುವುದೇ ಒಂದು ಆಕ್ಷನ್ ಸೀನ್‌ನಿಂದ. ಮೋಹಕ್‌ನ ನಡವಳಿಕೆ, ವ್ಯಕ್ತಿತ್ವವನ್ನು ಇಷ್ಟಪಡುವ ವಿಸ್ಮಯಾ ಆತನ ಹಿಂದೆ ಬೀಳುತ್ತಾಳೆ. ಮೋಹಕ್ ಒಪ್ಪೋವರೆಗೂ ಬಿಡದೆ ಹಿಂದೆ ಸುತ್ತುತ್ತಾಳೆ, ಮೋಹಕ್ ತಾಯಿ(ನಿರೋಷಾ) ಡಿಸಿ. ಸಾರ್ವಜನಿಕರ ಹಿತಕ್ಕಾಗಿ ದುಡಿಯುವ ಒಬ್ಬ ಪ್ರಾಮಾಣಿಕ ಅಧಿಕಾರಿ. ಅವ್ಯವಹಾರ ತಡೆಯುವ ದಿಟ್ಟತನ ತೋರಿದಾಗ ಆಕೆಯ  ಪ್ರಾಣ ತೆಗೆಯುವ ಸಂಚು ನಡೆಯುತ್ತದೆ, ಅದನ್ನು ಪುತ್ರ ಮೋಹಕ್ ತಡೆಯುತ್ತಾನೆ. ನಂತರ ನಡೆಯೋ ಕಥೆಯಲ್ಲಿ ಆ ಡಿಸಿಯನ್ನೇ ಕಿಡ್ನಾಪ್ ಮಾಡಲಾಗುತ್ತದೆ, ತಾಯಿಯನ್ನು ಉಳಿಸಿಕೊಳ್ಳಲು ಮೋಹಕ್ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ  ಪ್ರೀತಿಸುತ್ತಿದ ವಿಸ್ಮಯಾಳನ್ನೇ  ಶೂಟ್ ಮಾಡುತ್ತಾನೆ. ಆನಂತರ ಕಥೆ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಶಿಫ್ಟ್  ಆಗುತ್ತದೆ, ಆ ಕಿಡ್ನಾಪರ್  ಚಿತ್ರದುರ್ಗದ ರಾಮ್‌ನಾಯಕ್(ಶರತ್ ಲೋಹಿತಾಶ್ವ) ಎಂಬ ವ್ಯಕ್ತಿಯನ್ನು ತಾನೇಳಿದ ಜಾಗಕ್ಕೆ ಕರೆದುಕೊಂಡು ಬರುವ ಟಾಸ್ಕ್ ನೀಡುತ್ತಾನೆ, ನಂತರ ದುರ್ಗಕ್ಕೆ ಬರುವ ಮೋಹಕ್‌ಗೆ ಕಾಲೇಜಿನ ಗೆಳತಿ(ಪಾವನಾಗೌಡ)ಯ ಪರಿಚಯವಾಗುತ್ತದೆ, ಊರಿನ ಇತಿಹಾಸದ ಕುರಿತು ಕಥೆ ಬರೆಯಲು ಬಂದವನೆಂದು ಪರಿಚಯಿಸಿಕೊಳ್ಳುವ ಮೋಹಕ್, ನಾಯಕನ ಮನೆಯಲ್ಲೇ ಆಶ್ರಯ ಪಡೆಯುತ್ತಾನೆ, ನಂತರ  ರಾಮ್‌ನಾಯಕ್‌ ಪ್ರಜ್ಞೆ ತಪ್ಪಿಸಿ, ಕಿಡ್ನಾಪ್ ಮಾಡಿಕೊಂಡು ಬರುವ  ಮೋಹಕ್‌ಗೆ  ತಾನೊಬ್ಬ ರೈತನ ಮಗ, ಕುಟುಂಬವನ್ನುಳಿಸಿಕೊಳ್ಳಲು ವಿಷವನ್ನೆ ಕುಡಿದ ತಂದೆಯ ಬಗ್ಗೆ ತಿಳಿಯುತ್ತದೆ. ಅದರ ಹಿಂದಿರುವ ಫರ್ಟಿಪೈಸರ್ ಮಾಫಿಯಾ, ಬಂಡವಾಳಶಾಹಿಗಳ ಕುತಂತ್ರ ಕುಟುಂಬದ ಮೇಲೆ ನಡೆದ ಅನ್ಯಾಯದ ವಿರುದ್ದ ಸಿಡಿದೇಳುವ ಮೋಹಕ್  ಯಾವರೀತಿ ಸೇಡು ತೀರಿಸಿಕೊಳ್ಳುತ್ತಾನೆ ಎನ್ನುವುದೇ  ಕ್ಲೈಮ್ಯಾಕ್ಸ್.  ಇಲ್ಲಿ ನಿರ್ದೇಶಕರು ಮತ್ತೊಂದು ಭಾಗದ ಸುಳಿವನ್ನೂ ನೀಡಿದ್ದಾರೆ, ನಿಜವಾದ ಫೈಟರ್ ರೈತನೇ  ಎಂದು ತೋರಿಸಿದ್ದಾರೆ. ಒಂದು ಸೋಷಿಯಲ್ ಕಾಸ್‌ಗಾಗಿ ನಾಯಕ  ಹೇಗೆ ಹೋರಾಟ  ನಡೆಸುತ್ತಾನೆ  ಎಂಬುದನ್ನು ಮನಮುಟ್ಟುವ ಹಾಗೆ ಹೇಳಿರುವ ನಿರ್ದೇಶಕರ ಆಶಯವನ್ನು ಮೆಚ್ಚಬೇಕು.  
 
ವಿನೋದ್ ಪ್ರಭಾಕರ್ ನಟನೆ  ಗಿಂತ ಆಕ್ಷನ್ ನಲ್ಲೇ ಮಿಂಚಿದ್ದಾರೆ. ಹಾಡಿನಲ್ಲೇ ಫೈಟ್  ಮಾಡಿರುವುದು ವಿಶೇಷ,  ಸಾವಯುವ ಕೃಷಿಕನಾಗಿ ರಾಜೇಶ್ ನಟರಂಗ ಗಮನ ಸೆಳೆಯತ್ತಾರೆ, ಹಿರಿಯ ನಟಿ ನಿರೋಷಾ ನಾಯಕನ ತಾಯಿಯಾಗಿ  ಪ್ರಬುದ್ದ ಅಭಿನಯ ನೀಡಿದ್ದಾರೆ, ನಾಯಕನ ತಾತನ ಪಾತ್ರದಲ್ಲಿ ಸಿದ್ಲಿಂಗು ಶ್ರೀಧರ್ ಅವರ ಎಂಟ್ರಿ ಅದ್ಭುತವಾಗಿದೆ,  ಚಿತ್ರದ ಪ್ರಥಮಾರ್ಧದಲ್ಲಿ  ನಾಯಕಿ ಲೇಖಾಚಂದ್ರ ಅವರೇ ಸಂಪೂರ್ಣ ಆವರಿಸಿದ್ದಾರೆ, ಪಾವನಾಗೌಡ ಬಂದು ಹೋಗುತ್ತಾರೆ. ಕುರಿ ಪ್ರತಾಪ್ ಅವರ ಹಾಸ್ಯ ದೃಶ್ಯಗಳು ಸಖತ್  ಕಾಮಿಡಿಯಾಗಿವೆ, ಗುರುಕಿರಣ್ ಅವರ ಸಂಗೀತದ ಹಾಡುಗಳು ಕೇಳುವಂತಿವೆ, ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ಅವರು  ಚಿತ್ರಕ್ಕಾಗಿ ಸಾಕಷ್ಟು ಖರ್ಚು ಮಾಡಿರುವುದು ತೆರೆಯಮೇಲೆ ಕಾಣಿಸುತ್ತದೆ,
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed